ಎಕಿನೊಡರ್ಮೇಟ 

ಅಕಶೇರುಕಗಳಲ್ಲಿ ಅತಿಮುಖ್ಯವಾದ ಒಂದು ವಂಶ ಎಕಿನೊಡರ್ಮೇಟ. ಇವನ್ನು ಗುರುತಿಸುವುದು ಅತಿಸುಲಭ. ಇಂದು ಜೀವಂತವಾಗಿರುವ ಎಲ್ಲಾ ಎಕಿನೊಡರ್ಮೇಟ ಜೀವಿಗಳು ಕಡಲವಾಸಿಗಳು. ಶರೀರ ರೇಡಿಯಲ್ ಸಿಮಿಟ್ರಿಯನ್ನು ಹೊಂದಿದೆ. ತಲೆ ಅಥವಾ ಮುಂತುದಿ ಈ ಜೀವಿಗಳಲ್ಲಿಲ್ಲ. ಶರೀರ ದುಂಡಗೆ ಅಥವಾ ನಾಳದಂತೆ ಅಥವಾ ನಕ್ಷತ್ರದಂತಿರುತ್ತದೆ. ಸಾಮಾನ್ಯವಾಗಿ ಶರೀರದಲ್ಲಿ ಐದು ಬಾಹುಗಳು ಇರುತ್ತವೆ. ಕೆಲವು ಬಾರಿ ಈ ಬಾಹುಗಳು ತಟ್ಟೆಯಂತಿರುವ ಶರೀರದ ಅಂಚಿನಿಂದ ಹುಟ್ಟಿಕೊಂಡಿರುತ್ತವೆ. ಈ ವಂಶಕ್ಕೆ ಸೇರಿದ ಹಾಲೋಥರಾಯ್ಡಿಯ ವರ್ಗದ ಜೀವಿಗಳನ್ನು ಬಿಟ್ಟರೆ ಮಿಕ್ಕೆಲ್ಲ ಜೀವಿಗಳಲ್ಲೂ ಚರ್ಮದಲ್ಲಿ ಅತಿಗಟ್ಟಿಯಾದ ಮುಳ್ಳಿನಂತಿರುವ ರಚನೆಗಳು, ತಟ್ಟೆಗಳು ಇವೆ. ಹಾಲೋಥೂರಿಯಾಗಳ ಚರ್ಮ ಒರಟು. ಮುಳ್ಳುಗಳಿಲ್ಲ.

	ಡಿಂಬಾವಸ್ಥೆಯಲ್ಲಿ ಸಮಪಾಶ್ರ್ವ ದೇಹವನ್ನುಳ್ಳ ಹೊಂದಿದ್ದು ಪ್ರೌಢಾವಸ್ಥೆಯಲ್ಲಿ ಸಮಪಾಶ್ರ್ವಸ್ಥಿತಿ ಮಾಯವಾಗಿ ಶರೀರ ಪಂಚಭುಜಾಕೃತಿಯಂತಾಗುತ್ತದೆ. ಇವುಗಳಿಗೆ ನಿರ್ದಿಷ್ಟ ತಲೆ ಅಥವಾ ಮಿದುಳು ರೂಪಿತವಾಗಿಲ್ಲ. ಶರೀರದೊಳಗೆ ಸುಣ್ಣಮಿಶ್ರಿತವಾದ ಅಸ್ಥಿರಚನೆಯಿದೆ. ಈ ರಚನೆ ಬೇರ್ಪಟ್ಟಂತಿರುವ ಫಲಕಗಳಂತಿದೆ. ಮುಳ್ಳುಗಳಿರುವುದು ಸಾಮಾನ್ಯ. ಇವುಗಳಲ್ಲಿ ಜಲಪರಿಚಲನಾಂಗ ಎಂಬ ಅಂಗವಿದೆ. ಈ ಅಂಗ ದೇಹಾಂತರವಕಾಶದಿಂದ ಹುಟ್ಟಿ ಬರುತ್ತದೆ. ಹೊರಗಿನಿಂದ ನೀರು ತೆಗೆದುಕೊಳ್ಳಲು ಇದರಲ್ಲಿ ಒಂದು ಜಲ್ಲಡಿಯಂಥ ರಂಧ್ರವಿದೆ. ಒಳಸೇರಿದ ನೀರು ನಳಿಕೆಪಾದಗಳ ಮೂಲಕ ಹೊರ ಬರುತ್ತದೆ.

	ಇತರ ಪ್ರಾಣಿಗಳಲ್ಲಿರುವಂತೆ ಮುಂತುದಿ ಹಿಂತುದಿಗಳಿಗೆ ಬದಲಾಗಿ ಈ ಪ್ರಾಣಿಗಳಲ್ಲಿ ಓರಲ್ ಮತ್ತು ಅಬೋರಲ್ ತುದಿಗಳಿವೆ. ತಟ್ಟೆಯಂತಿರುವ ಶರೀರದ ಮಧ್ಯಭಾಗದಲ್ಲಿ ಬಾಯಿ ಇದೆ. ಬಾಯಿಯಿರುವ ಭಾಗವನ್ನು ಓರಲ್ ಭಾಗವೆಂತಲೂ ಅದಕ್ಕೆ ವಿರುದ್ಧ ಭಾಗವನ್ನು ಅಬೋರಲ್ ಭಾಗವೆಂತಲೂ ಕರೆಯುತ್ತೇವೆ. ಅಬೋರಲ್ ಭಾಗದಲ್ಲಿ ಗುದದ್ವಾರ ಮತ್ತು ಮ್ಯಾಡ್ರಿಪೊರೈಟ್ ರಂಧ್ರಗಳಿವೆ. ಹಾಲೊಥೂರಾಯ್ಡಿಯಾಗಳಲ್ಲಿ ಶರೀರ ಸೌತೆಕಾಯಿನಂತಾಗಿ ಓರಲ್‍ಭಾಗ ಮುಂತುದಿಯಲ್ಲೂ ಅಬೋರಲ್‍ಭಾಗ ಹಿಂತುದಿಯಲ್ಲೂ ಇರುತ್ತದೆ. ಎಕಿನೊಡರ್ಮೇಟ ವಂಶದ ವರ್ಗಗಳಾದ ಆಸ್ಟೆರಾಯ್ಡಿಯ ಮತ್ತು ಎಕಿನಾಯ್ಡಿಯ ಜೀವಿಗಳು ತಮ್ಮ ಓರಲ್ ಭಾಗವನ್ನು ಭೂಮಿಗೆ ಆಸರೆಯಾಗಿಟ್ಟುಕೊಂಡು ಚಲಿಸುತ್ತವೆ. ಆದರೆ ಕ್ರೈನಾಯ್ಡಿಯ ವರ್ಗದಲ್ಲಿ ಮಾತ್ರ ಅವು ಭೂಮಿಗೆ ಅಂಟಿಕೊಂಡಿರಲಿ ಅಥವಾ ಇಲ್ಲದಿರಲಿ ಅಬೋರಲ್ ಭಾಗವನ್ನು ಭೂಮಿಗೆ ಆಸರೆಯಾಗಿಟ್ಟುಕೊಂಡು ಚಲಿಸುತ್ತವೆ. ಇವುಗಳಲ್ಲಿ ಓರಲ್ ಭಾಗ ಮೇಲುಮುಖವಾಗಿರುತ್ತದೆ. ಮಿಕ್ಕವುಗಳಲ್ಲಿ ಅಬೋರಲ್ ಭಾಗ ಮೇಲುಮುಖವಾಗಿರುತ್ತದೆ. ಎಕಿನೊಡರ್ಮ ಜೀವಿಯ ಶರೀರದ ಮೇಲೆ ಸರಿಯಾದ ಸಿಮಿಟ್ರಿಯಲ್ಲಿ ಜೋಡಿಸಿಕೊಂಡಿರುವಂತೆ ಐದು ಸಾಲುಗಳಿವೆ. ಇವು ತಗ್ಗಾದ ಹಳ್ಳದಂತೆ ಅಥವಾ ನೇಗಿಲಿನ ತೆರೆಯಂತೆ ಕಾಣುತ್ತಿರುತ್ತವೆ. ಇವನ್ನು ಆಂಬುಲ್ಯಾಕರಲ್ ಕಾಲುವೆಗಳೆನ್ನುತ್ತೇವೆ. ಈ ಕಾಲುವೆಗಳ ಒಳಬುಡದಿಂದ ನಳಿಕೆಪಾದಗಳು ಹೊರಬರುತ್ತವೆ. ಈ ಪಾದಗಳು ಜಲಪರಿಚಲನೆಗೆ ಸೇರಿದ ಅಂಗಗಳು. ಆಂಬುಲ್ಯಾಕರಲ್‍ಗಳ ಮಧ್ಯೆಯಿರುವ ಸ್ಥಳಕ್ಕೆ ಇಂಟರ್ ಆಂಬುಲ್ಯಾಕರಲ್ ಅಥವಾ ಇಂಟರ್‍ರೇಡಿಯೈ ಎಂದು ಹೆಸರು. 

ಚಿತ್ರ - ಎಕಿನೊಡರ್ಮ ವಂಶದ ವಿವಿಧ ಜೀವಿಗಳು

	ಎಕಿನೊಡರ್ಮ್‍ಗಳ ಶರೀರದ ಹೊರಹೊದಿಕೆಯಲ್ಲಿ ಹೊರದರ್ಮ, ಒಳದರ್ಮ ಮತ್ತು ಸೀಲಾಮಿನ ಎಪಿಥೀಲಿಯಂ ಪದರಗಳಿವೆ. ಒಳದರ್ಮದಲ್ಲಿ ಸುಣ್ಣಮಿಶ್ರಿತ ಅಸ್ಥಿಯಿದೆ. ಈ ಅಸ್ಥಿಯನ್ನು ಒಳದರ್ಮವೇ ಉತ್ಪತ್ತಿ ಮಾಡುತ್ತದೆ. ಅದರಿಂದ ಎಕಿನೊಡರ್ಮ್‍ಗಳಲ್ಲಿರುವ ಅಸ್ಥಿಯನ್ನು ಒಳಾಸ್ಥಿಯೆನ್ನುತ್ತೇವೆ. ಈ ಅಸ್ಥಿ ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಬೆಸುಗೆಹಾಕಿದ ತಟ್ಟೆಗಳಂತಿರುವ ರಚನೆಗಳನ್ನೊಳಗೊಂಡಿದೆ. ಇದರಿಂದಾಗಿ ಶರೀರ ಒಂದು ಭದ್ರವಾದ ಪೆಟ್ಟಿಗೆಯಂತೆ ಕಾಣುತ್ತದೆ. ಈ ರೀತಿಯ ಕವಚ ಪೆಟ್ಟಿಗೆಯನ್ನು ಥೀಕ ಅಥವಾ ಟೆಸ್ಟ್ ಎನ್ನುತ್ತೇವೆ. ಈ ಥೀಕ ಅಥವಾ ಟೆಸ್ಟ್ ಬೆಸುಗೆಯಿಲ್ಲದ ಆಸಿಕಲ್‍ಗಳೆಂಬ ರಚನೆಗಳಿಂದಲೂ ಆಗಿರಬಹುದು. ಹಾಲೊಥೂರಾಯ್ಡಿಯದಲ್ಲಿ ಈ ಆಸಿಕಲ್‍ಗಳು ನಶಿಸಿಹೋಗಿ ಅತಿಸೂಕ್ಷ್ಮವಾದ ಮುಳ್ಳಿನಂಥ ರಚನೆಗಳಿವೆ. ಅಸ್ಥಿತಟ್ಟೆ ಹಾಗೂ ಆಸಿಕಲ್‍ಗಳಲ್ಲದೆ ದಬ್ಬಳ ಅಥವಾ ಸೂಜಿಗಳಂಥ ಮುಳ್ಳುಗಳೂ ಈ ಜೀವಿಗಳಲ್ಲಿ ಸಾಮಾನ್ಯ. ಈ ರಚನೆಗಳಿಗೆಲ್ಲ ಮೇಲು ಹೊರದರ್ಮದ ಹೊದಿಕೆಯಿದೆ. ಒಳದರ್ಮದ ತಳದಲ್ಲಿ ಸ್ನಾಯುಗಳಿವೆ. ಹಾಲೊಥೂರಾಯ್ಡಿಯ ವರ್ಗದಲ್ಲಿ ಸ್ನಾಯುಗಳು ಚೆನ್ನಾಗಿ ಬೆಳೆದಿವೆ.

ಚಿತ್ರ - ಈವ್ಯಾಸ್ಟ್ರಿಯಸ್ ಟ್ರೋಸ್‍ಕಿಲೈ ಪ್ರಾಣಿ

	ಪ್ರಾಣಿ ಜಗತ್ತಿನಲ್ಲೇ ಕಂಡುಬರದಿರುವ ಒಂದು ರೀತಿಯ ವಿಚಿತ್ರವಾದ ಅಂಗ ಎಕಿನೊಡರ್ಮೇಟ ವಂಶದಲ್ಲಿದೆ. ಇದೇ ಜಲಪರಿಚಲನಾಂಗ. ಈ ಅಂಗ ಸುವ್ಯವಸ್ಥಿತ ರೀತಿಯ ನಾಳಗಳನ್ನು ಹೊಂದಿದೆ. ಈ ನಾಳಗಳು ಆಂಬುಲ್ಯಾಕರಲ್ ಕಾಲುವೆಗಳ ತಳದಲ್ಲಿವೆ. ಈ ಕಾಲುವೆಗಳಲ್ಲಿ ನೀರು ಹರಿಯುತ್ತದೆ. ಜಲ ಪರಿಚಲನಾಂಗದ ಮುಖ್ಯಭಾಗಗಳೆಂದರೆ ಜಲರಂಧ್ರ ಕಲ್ಲುಗಾಲುವೆ, ಉಂಗುರ ಕಾಲುವೆ ಮತ್ತು ರೇಡಿಯಲ್ ಕಾಲುವೆಗಳು ಹಾಗೂ ನಳಿಕೆಪಾದಗಳು. ಜಲರಂಧ್ರ ಸಾಮಾನ್ಯವಾಗಿ ಪ್ರಾಣಿಯ ಅಬೋರಲ್ ಭಾಗದಲ್ಲಿರುತ್ತದೆ. ತಟ್ಟೆಯಂತಿರುವ ಶರೀರದ ಇಂಟರ್ ರೇಡಿಯಲ್ ಭಾಗದಲ್ಲಿ ಇದು ಇದೆ. ಜಲರಂಧ್ರವೇನಾದರೂ ವಿಭಾಗವಾಗಿ ಜಲ್ಲಡಿಯಂತಾಗಿದ್ದರೆ ಅದನ್ನು ಮ್ಯಾಡ್ರಿಪೊರೈಟ್ ಎನ್ನುತ್ತೇವೆ. ಈ ರಂಧ್ರ ಕಲ್ಲುಗಾಲುವೆಗೆ ಸಂಪರ್ಕ ಕಲ್ಪಿಸುತ್ತದೆ. ಈ ನಾಳದ ಗೋಡೆಗಳು ಸುಣ್ಣ ಮುಂತಾದ ಲೇಪನಗಳಿಂದಾಗಿ ಗಟ್ಟಿಯಾಗಿರುವುದರಿಂದ ಇದಕ್ಕೆ ಕಲ್ಲುಗಾಲುವೆಯೆಂದು ಹೆಸರು ಬಂದಿದೆ. ಈ ಕಲ್ಲುಗಾಲುವೆ ಉಂಗುರ ಕಾಲುವೆಗೆ ಸಂಪರ್ಕ ಕಲ್ಪಿಸುತ್ತದೆ. ಉಂಗುರ ಕಾಲುವೆಯಿಂದ ರೇಡಿಯಲ್ ಕಾಲುವೆಗಳು ಹೊರಟು ಆಂಬುಲ್ಯಾಕರಲ್ ಕಾಲುವೆಗಳೊಳಕ್ಕೆ ಪ್ರವೇಶಿಸುತ್ತವೆ. ರೇಡಿಯಲ್ ಕಾಲುವೆಗಳ ಇಕ್ಕೆಲದಲ್ಲಿ ಚಿಕ್ಕ ಚಿಕ್ಕ ನಾಳಗಳಂತಿರುವ ಅಡ್ಡಕಾಲುವೆಗಳಿವೆ. ಈ ಅಡ್ಡಕಾಲುವೆಗಳನ್ನು ನಳಿಕೆ ಪಾದಗಳಲ್ಲಿ ಕೊನೆಗೊಳ್ಳುತ್ತವೆ. ನಳಿಕೆಪಾದದ ಬುಡದಲ್ಲಿ ಆಂಪುಲ್ಲ ಎಂಬ ಚೀಲದಂಥ ರಚನೆಯಿದೆ. ಈ ಆಂಪುಲ್ಲದಿಂದ ನಾಳದಂಥ ರಚನೆ ಹೊರಚಾಚಿದೆ. ಈ ನಾಳದ ತುದಿಯಲ್ಲಿ ಅಂಟು ಸಿಂಬಿಯಿದೆ. ಈ ಸಿಂಬಿಯ ಮಧ್ಯೆ ಸೂಕ್ಷ್ಮ ರಂಧ್ರವಿದೆ. ನಳಿಕೆಪಾದದ ಆಂಪುಲ್ಲದೊಳಗೆ ಒಂದು ಕವಾಟವಿದೆ. ಇದು ನೀರನ್ನು ಹಿಂದಕ್ಕೆ ಹೋಗದಂತೆ ತಡೆಗಟ್ಟುತ್ತದೆ. ಎರಡು ರೇಡಿಯಲ್ ಕಾಲುವೆಗಳ ಮಧ್ಯೆಯಿರುವ ಉಂಗುರಗಾಲುವೆಯ ಭಾಗದಲ್ಲಿ ಪೋಲಿಯನ್ ವೆಸಿಕಲ್ ಮತ್ತು 

ಚಿತ್ರ : ಸಮುದ್ರ ಸೌತೆ

ಚಿತ್ರ - ಎಕಿನೋಡರ್ಮೇಟ

ಟೀಡ್‍ಮನ್ ಬಾಡಿಗಳೆಂಬ ರಚನೆಗಳಿವೆ. ನೀರು ಜಲರಂಧ್ರ ಅಥವಾ ಮ್ಯಾಡ್ರಿಪೊರೈಟ್ ರಂಧ್ರದ ಮೂಲಕ ಕಲ್ಲುಗಾಲುವೆಗೆ ಬರುತ್ತದೆ. ಕಲ್ಲುಗಾಲುವೆಯಿಂದ ಉಂಗುರಗಾಲುವೆಯನ್ನು ತಲಪಿ ಅಲ್ಲಿಂದ ರೇಡಿಯಲ್ ಕಾಲುವೆಗಳಿಗೆ ಹರಿಯುತ್ತದೆ. ಈ ಕಾಲುವೆಗಳಿಂದ ಅಡ್ಡಕಾಲುವೆಗಳ ಮೂಲಕ ನಳಿಕೆಪಾದಗಳ ಆಂಪುಲ್ಲ ಭಾಗವನ್ನು ತಲಪುತ್ತದೆ. ಆಂಪುಲ್ಲ ತುಂಬಿದಮೇಲೆ ಸಂಕುಚಿಸುತ್ತದೆ. ಇದರಿಂದಾಗಿ ನೀರು ಆಂಪುಲ್ಲ ಮುಂದಿರುವ 

ಚಿತ್ರ - eóÉೂರೊಆಸ್ಟರ್ ಎವರಮ್ಯಾನ್ನಿ ಪ್ರಾಣಿ

ನಾಳದ ಮೂಲಕ ಬಿರುಸಿನಿಂದ ಹೊರಹೊಮ್ಮುತ್ತದೆ. ಈ ಕ್ರಿಯೆಯಿಂದಾಗಿ ಜೀವಿ ಮೆಲ್ಲನೆ ಚಲಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಜಲಪರಿಚಲನೆಯಿಂದ ಉಸಿರಾಟಕ್ಕೂ ಅನುಕೂಲವಾಗುತ್ತದೆ. ನೀರಿನಲ್ಲಿರುವ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡನ್ನು ಜೀವಿ ಹೊರಹಾಕುತ್ತದೆ. ಇದಲ್ಲದೆ ಆಹಾರ ಸಂಗ್ರಹಣೆಗೂ ಈ ನಳಿಕೆ ಪಾದಗಳು ಸಹಾಯಮಾಡುತ್ತವೆ. ಓಫಿಯುರಾಯ್ಡಿಯ ಹಾಲೊಥುರಾಯ್ಡಿಯ ಮತ್ತು ಕ್ರೈನಾಯ್ಡಿಯಗಳಲ್ಲಿ ಮ್ಯಾಡ್ರಿಪೊರೈಟ್ ರಂಧ್ರ ಓರಲ್ ಭಾಗದಲ್ಲಿವೆ.

ಚಿತ್ರ - ಸಮುದ್ರ ಸೌತೆ

	ಕಂಟಕಚರ್ಮಿಗಳ ನರಮಂಡಲ ಕೆಳಮಟ್ಟದ್ದು, ಶರೀರದಲ್ಲಿ ನರಗಳ ಜಾಲಾಂದ್ರವಿದೆ. ಈ ಪ್ರಾಣಿಗಳಲ್ಲಿರುವ ನರಗಳ ಜಾಲಾಂದ್ರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಮೂರು ಭಾಗಗಳು ಶರೀರದಲ್ಲಿ ಹಂತಹಂತವಾಗಿವೆ. ಅವು ಎಕ್ಟೊನ್ಯೂರಲ್ ಹಂತ. ಹೈಪೊನ್ಯೂರಲ್ ಹಂತ. ಎಂಟೊನ್ಯೂರಲ್ ಹಂತ. 1. ಎಕ್ಟೊನ್ಯೂರಲ್ ಹಂತ. ಜಾಲಾಂದ್ರ ಓರಲ್ ಭಾಗದಲ್ಲಿ ಅನ್ನನಾಳದ ಸುತ್ತಲೂ ಒಂದು ನರಮುಡಿಯನ್ನು ಹೊಂದಿದೆ. ಈ ನರಮುಡಿಯಿಂದ ನರಗಳು ಶರೀರದ ಪಂಚಭುಜಗಳಿಗೂ ಪಸರಿಸಿವೆ. ಪ್ರತಿ ಭುಜದಲ್ಲಿರುವ ನರ ಆಂಬುಲ್ಯಾಕ್ರದೊಳಗಿದ್ದು ಬಾಹುವಿನ ತುದಿಯವರೆಗೂ ಪಸರಿಸಿದೆ. ನರದಲ್ಲಿ ಅಲ್ಲಲ್ಲಿ ಗಂಟುಗಳಂಥ ಗ್ಯಾಂಗ್ಲಿಯಾಗಳಿವೆ. 2. ಹೈಪೊನ್ಯೂರಲ್ ಹಂತ ಶರೀರದ ಒಳಭಾಗದಲ್ಲಿ ಅಂದರೆ ಒಳದರ್ಮದ ಭಾಗದಲ್ಲಿದೆ. 3. ಎಂಟೊನ್ಯೂರಲ್ ಹಂತ ಅಬೋರಲ್ ಭಾಗದಲ್ಲಿದೆ. ಇವು ರಚನೆಯಲ್ಲಿ ಎಂಟೊನ್ಯೂರಲ್ ನರಜಲಾಂದ್ರವನ್ನೇ ಹೋಲುತ್ತವೆ. ಈ ವಂಶದಲ್ಲಿ ಚೆನ್ನಾಗಿ ಬೆಳೆದಿರುವ ಜ್ಞಾನೇಂದ್ರಿಯಗಳಿಲ್ಲ.

ಚಿತ್ರ 7

	ಎಕಿನೊಡರ್ಮ ಪ್ರಾಣಿಗಳಲ್ಲಿ ವಿಶಾಲವಾದ ದೇಹಾಂತರವಕಾಶವಿದೆ. ಈ ದೇಹಾಂತರಾವಕಾಶಕ್ಕೆ ಸೀಲಾಂ ಎಂದು ಹೆಸರು. ಈ ಪ್ರಾಣಿಗಳ ಸೀಲಾಂ ಎಂಟಿರೋಸೀಲಸ್ ರೀತಿಯಲ್ಲಿ ಬೆಳೆಯುತ್ತದೆ. ಈ ಅವಕಾಶದೊಳಗೆ ಜೀರ್ಣಾಂಗಗಳು, ಜನನಾಂಗಗಳು ಇವೆ. ಕ್ರೈನಾಯ್ಡಿಯ ವರ್ಗದಲ್ಲಿ ಮಾತ್ರ ಈ ದೇಹಾಂತರವಕಾಶದೊಳಗೆ ಬಲೆಯಾಕಾರಕ್ಕೆ ಬೆಳೆದ ಸಂಯೋಜಕ ಅಂಗಾಂಶದ ಬೆಳೆವಣಿಗೆಯಿದೆ. ಸೀಲಾಂ ಅಥವಾ ದೇಹಾಂತರವಕಾಶ ಮಧ್ಯದರ್ಮ ಮೂಲದಿಂದ ಹುಟ್ಟಿಬರುವ ಎಪಿಥೀಲಿಯಂ ಕೋಶಗಳ ಲೇಪನವನ್ನು ಹೊಂದಿರುತ್ತದೆ. ಇದಕ್ಕೆ ಪೆರಿಟೋನಿಯಂ ಎಂದು ಹೆಸರು. ಈ ಪೆರಿಟೋನಿಯಂ ಲೇಪನ ಜೀರ್ಣಾಂಗಗಳ ಹೊರಭಾಗದಲ್ಲೂ ಇರುತ್ತದೆ. ಸೀಲಾಂನೊಳಕ್ಕೆ ಚಾಚಿಕೊಂಡಿರುವ ಈ ಅಂಗಗಳಿಗೆ ಮಿಸೆಂಟರಿಗಳು ಆಸರೆಯಾಗಿವೆ.

	ಬಹಳ ಎಕಿನೊಡರ್ಮ ಜೀವಿಗಳಲ್ಲಿ ಶುದ್ಧೀಕರಣಕ್ರಿಯೆ ಮತ್ತು ಉಸಿರಾಡುವ ಕ್ರಿಯೆಗಳಿಗೆ ಪ್ರತ್ಯೇಕವಾದ ಅಂಗಗಳಿಲ್ಲ. ಹಾಲೊಥುರಾಯ್ಡಿಯ ವರ್ಗದಲ್ಲಿ ಮಾತ್ರ ಉಸಿರಾಡಲು ಪ್ರತ್ಯೇಕವಾದ ಅಂಗವಿದೆ. ಮಿಕ್ಕವುಗಳಲ್ಲಿ ಉಸಿರಾಟಕ್ಕೆ ಸಂಪೂರ್ಣ ಶರೀರವೇ ಸಹಕರಿಸಬೇಕಾಗುತ್ತದೆ. ರಕ್ತಪರಿಚಲನಾಂಗದಲ್ಲಿ ನಿರ್ದಿಷ್ಟ ರೀತಿಯ ರಕ್ತನಾಳಗಳಿಲ್ಲದೇ ದೇಹಾಂತರವಕಾಶದಲ್ಲಿರುವ ಕೆಲವು ಕಾಲುವೆಗಳಲ್ಲಿ ರಕ್ತ ತುಂಬಿಕೊಂಡಿದೆ. ಈ ಕಾಲುವೆಗಳಲ್ಲಿ ನಾಳಗಳಿಲ್ಲ.
					
ಕ್ಲೈಪಿಯಾಸ್ಟರ್

ಆಂಟಿಡಾನ್

ಮೆಲ್ಲೀಟ

	ಅನ್ನನಾಳದಲ್ಲಿ ಬಾಯಿ ಮತ್ತು ಗುದದ್ವಾರಗಳಿವೆ. (ಕೆಲವು ಓಫಿಯೋರಾಯ್ಡಿಯ ಆಸ್ಟೆರಾಯ್ಡಿಯ ಜೀವಿಗಳಲ್ಲಿ ಗುದದ್ವಾರವೇ ಇಲ್ಲ). ಅನ್ನನಾಳ ಸಾಮಾನ್ಯವಾಗಿ

ಚಿತ್ರ; ಆಂಟಿಡಾನ್ ಪ್ರಾಣಿಯ ಲಾರ್ವ

ಸುರುಳಿ ಸುತ್ತಿಕೊಂಡಿರುತ್ತದೆ. ಬಾಯಿ ಓರಲ್ ಭಾಗದ ಮಧ್ಯೆಯೂ ಗುದದ್ವಾರ ಅಬೋರಲ್ ಭಾಗದ ಮಧ್ಯೆ ಅಥವಾ ಮಧ್ಯದಿಂದ ಸ್ವಲ್ಪ ಅತ್ತಕಡೆ ಇರುತ್ತದೆ. ಕ್ರೈನಾಯ್ಡಿಯಗಳಲ್ಲಿ ಬಾಯಿ ಮತ್ತು ಗುದದ್ವಾರಗಳು ಓರಲ್ ಭಾಗದಲ್ಲಿಯೇ ಇವೆ. ಬಹಳ ಇರ್ರೆಗ್ಯುಲರ್ ಎಕಿನಾಯ್ಡಿಯ ಮತ್ತು ಓಫಿಯುರಾಯ್ಡಿಯಗಳಲ್ಲಿ ಅನ್ನನಾಳ ಸುರುಳಿ ಸುತ್ತಿಕೊಂಡಿರದೆ ನೇರವಾಗಿ ಕೊಳವೆಯಂತೆಯೇ ಇದೆ. ಇವುಗಳಲ್ಲಿ ಜಠರ ಬಹಳ ದೊಡ್ಡದು. ಆಸ್ಟಿರಾಯ್ಡಿಯದಲ್ಲಿ ಜಠರ ಐದು ಬಾಹುಗಳಿಗೂ ಪಸರಿಸಿದೆ. ಈ ಜಠರ ಭಾಗಗಳ ಜೊತೆ ಸೊಂಪಾಗಿ ಬೆಳೆದ ಜಠರ ಗ್ರಂಥಿಗಳಿವೆ.

ಚಿತ್ರ - ಅರ್ಚಿನ್ನಿನ ಟೆಸ್ಟ್

	ಜನನಾಂಗ ಬಹಳ ಸರಳರೀತಿಯದು. ಒಂದೇ ಒಂದು ಜನನಾಂಗವಿದ್ದು ಅದು ಶರೀರದ ಸೌಷ್ಠವಕ್ಕೆ ತಕ್ಕಂತೆ ತನ್ನ ಸ್ಥಾನವನ್ನಲಂಕರಿಸಿಕೊಂಡಿದೆ. ಇದರ ರಂಧ್ರ ಜಲರಂಧ್ರ; ಗುದದ್ವಾರವಿರುವ ಇಂಟರ್‍ರೇಡಿಯಸ್ ಭಾಗದಲ್ಲಿದೆ. ಹಾಲೊಥುರಾಯ್ಡಿಯ ವರ್ಗದಲ್ಲಿ ಈ ಸ್ಥಿತಿ ಇಂದಿಗೂ ಇದೆ. ಆದರೆ ಇಂದಿರುವ ಮಿಕ್ಕ ಎಕಿನೊಡರ್ಮಗಳಲ್ಲಿ ಶರೀರದ ಸಿಮಿಟ್ರಿಗೆ ತಕ್ಕಂತೆ ಸಿಮಿಟ್ರಿಕಲ್ ಜನನಾಂಗಗಳಿವೆ. ಸಾಮಾನ್ಯವಾಗಿ ಹೆಣ್ಣು ಮತ್ತು ಗಂಡುಗಳೆಂಬ ಭೇದ ಈ ಪ್ರಾಣಿಗಳಲ್ಲಿದೆ. (ಕೆಲವು ಹಾಲೊಥುರಾಯ್ಡಿಯ ಮತ್ತು ಓಫಿಯುರಾಯ್ಡಿಯಗಳಲ್ಲಿ ದ್ವಿಲಿಂಗತ್ವವೂ ಇದೆ). ಆದರೆ ಗಂಡು ಹೆಣ್ಣುಗಳನ್ನು ಬಾಹ್ಯವಾಗಿ ಗುರುತಿಸಲಾಗುವುದಿಲ್ಲ. ಜನನಾಂಗಗಳಲ್ಲಿ ಉತ್ಪತ್ತಿಯಾಗುವ ರೇತಸ್ಸು ಮತ್ತು ಮೊಟ್ಟೆಗಳು ನೀರಿಗೆ ಬೀಳುತ್ತವೆ. ನಿಷೇಚನೆ ನೀರಿನಲ್ಲಿಯೇ ನಡೆಯುತ್ತದೆ. ನಿಷೇಚನಗೊಂಡ ಮೊಟ್ಟೆ ಬೆಳೆದು ಬಂದು ಲಾರ್ವಾವಾಗುತ್ತದೆ. ಎಕಿನೊಡರ್ಮ ವಂಶದ ಪ್ರತಿಜೀವಿಯ ಬೆಳೆವಣಿಗೆಯಲ್ಲೂ ಲಾರ್ವಾಸ್ಥಿತಿ ಇದ್ದೇ ಇರುತ್ತದೆ. ಈ ವಂಶದ ಲಾರ್ವಾ ಜೀವಿಗಳು (ಬೈಲ್ಯಾಟರಲ್) ಸಮಪಾಶ್ರ್ವಸ್ಥಿತಿಯನ್ನು ಹೊಂದಿರುತ್ತವೆ. ಆದರೆ ಈ ಸಿಮಿಟ್ರಿ ಲಾರ್ವಾ ಬೆಳೆದಂತೆ ಮಾಯವಾಗುತ್ತ ಬಂದು ರೂಪಾಂತರಗೊಂಡು ವಯಸ್ಕ ಜೀವಿಯಾಗುತ್ತದೆ. ಈ ವಯಸ್ಕಜೀವಿಯಲ್ಲಿ ರೇಡಿಯಲ್ ಸಿಮಿಟ್ರಿ ಇದೆ.

ಚಿತ್ರ - ಕಡಲ ಕುಡಿಕೆ

	ಈಗ ಹೇಳಿರುವ ಎಲ್ಲ ಗುಣಲಕ್ಷಣಗಳು ಇಂದು ಬದುಕಿರುವ ಕಂಟಕ ಚರ್ಮಿಗಳಿಗೆ ಅನ್ವಯಿಸುತ್ತದೆ. ಹಿಂದಿದ್ದ ಜೀವಿಗಳು ತಮ್ಮ ಹೊರಕವಚ ಶರೀರದಿಂದಾಗಿ ಪಳೆಯುಳಿಕೆಗಳಾಗಿ ಇಂದಿಗೂ ಸಿಕ್ಕುತ್ತವೆ. ಇವುಗಳ ಅಭ್ಯಾಸದಿಂದ ಈ ವಂಶದ ಬಹಳ ವಿಚಾರಗಳನ್ನು ಪೂರ್ಣವಾಗಿ ಅರಿಯಲು ಅನುಕೂಲವಾಗಿದೆ. 
ವರ್ಗೀಕರಣ: ಎಕಿನೊಡರ್ಮ ವಂಶವನ್ನು ಎರಡು ಉಪವಂಶಗಳಾಗಿ ವರ್ಗೀಕರಿಸಲಾಗಿದೆ. 1. ಪೆಲ್‍ಮೆಟೋeóÉೂೀವ 2. ಎಲ್ಯುಥಿರೋeóÉೂೀವ.

ಉಪವಂಶ 1 ಪೆಲ್‍ಮೆಟೋeóÉೂೀವ: ಕೇವಲ ಒಂದು ವರ್ಗವನ್ನು ಬಿಟ್ಟರೆ ಈ ವಂಶಕ್ಕೆ ಸೇರಿದ ಇತರ ವರ್ಗಗಳು ಇಂದು ಬದುಕಿಲ್ಲ. ಅವುಗಳ ಪಳೆಯುಳಿಕೆಗಳು ಮಾತ್ರ ಇವೆ. ಈ ಉಪವಂಶದ ಪ್ರಾಣಿಗಳು ಸಸ್ಯಗಳಂತೆ ನೆಲಕ್ಕಂಟಿಕೊಂಡು ಬೆಳೆಯುತ್ತವೆ. ನೇರವಾಗಿ ಅಬೋರಲ್ ಭಾಗವೇ ನೆಲಕ್ಕಂಟಿಕೊಂಡಿರಬಹುದು ಅಥವಾ ಈ ಭಾಗದಲ್ಲಿ ತೊಟ್ಟಿನಂಥ ರಚನೆಯಿದ್ದು ಅದರ ಸಹಾಯದಿಂದ ಇವು ನೆಲಕ್ಕಂಟಿಕೊಂಡಿರಬಹುದು. ಈ ತೊಟ್ಟಿನಂಥ ರಚನೆ ಸುಣ್ಣಮಿಶ್ರಿತ ತಟ್ಟೆಗಳನ್ನೊಳಗೊಂಡಿರುತ್ತದೆ. ಓರಲ್ ಭಾಗ ಮೇಲ್ಮುಖವಾಗಿರುತ್ತದೆ. ಶರೀರದಲ್ಲಿ ಗಟ್ಟಿಯಾದ ಪೆಟ್ಟಿಗೆಯಂಥ ಥೀಕ ಅಥವಾ ಟೆಸ್ಟ್ ಇದೆ; ಓರಲ್ ಭಾಗದಲ್ಲಿ ಬಾಯಿ ಮತ್ತು ಗುದದ್ವಾರಗಳೆರಡೂ ಇವೆ. ಆಂಬುಲ್ಯಾಕ್ರಗಳು ಆಹಾರವನ್ನು ಸಂಗ್ರಹಿಸುವ ಕಾಲುವೆಗಳಾಗಿವೆ. ಓರಲ್ ಭಾಗದಲ್ಲಿ ಚೆನ್ನಾಗಿ ಬೆಳೆದ ಬಾಹುಗಳಿವೆ. ಆಂಬುಲ್ಯಾಕ್ರಗಳು ಈ ಬಾಹುಗಳ ತುದಿಯವರೆಗೂ ಪಸರಿಸಿವೆ. ಈ ಕಾಲುವೆಗಳಲ್ಲಿರುವ ನಳಿಕೆಪಾದಗಳು ಆಹಾರವನ್ನು ಹಿಡಿಯಲು ಸಹಕರಿಸುತ್ತವೆ. ಎಂಟೊನ್ಯೂರಲ್ ನರಮಂಡಲ ಅಥವಾ ಆಬೋರಲ್ ನರಮಂಡಲ ಚೆನ್ನಾಗಿ ಬೆಳೆದಿದೆ. ಈ ಉಪವಂಶದಲ್ಲಿ ಐದು ವರ್ಗಗಳಿವೆ. ಆದರೆ ಬದುಕುಳಿದಿರುವ ಪೆಲ್‍ಮೊಟೋಜೂóವಗಳೆಲ್ಲವೂ ಕ್ರೈನಾಯ್ಡಿಯ ವಗ್ಕ್ಕೆ ಸೇರಿದೆ.

ಚಿತ್ರ - ಕಡಲ ಕುಡಿಕೆ

ಕ್ರೈನಾಯ್ಡಿಯ: ಈ ವರ್ಗ ಇಂದು ಬದುಕಿರುವ ಹಾಗೂ ನಾಶವಾಗಿರುವ ಪ್ರಾಣಿಗಳೆರಡನ್ನೂ ಒಳಗೊಂಡಿದೆ. ಈ ಪ್ರಾಣಿಗಳು ನೆಲಕ್ಕೆ ತೊಟ್ಟಿನಿಂದ ಅಂಟಿಕೊಂಡಿರುತ್ತವೆ. ಓರಲ್ ಭಾಗ ಮೇಲ್ಮುಖವಾಗಿರುತ್ತದೆ. ಶರೀರ ಪಂಚಮುಖವನ್ನು ಹೊಂದಿದೆ. ಥೀಕ ರಂಧ್ರಗಳಿಲ್ಲದ ತಟ್ಟೆಗಳನ್ನೊಳಗೊಂಡಿದೆ. ಬದುಕಿರುವ ಪ್ರಾಣಿಗಳ ಬಾಹುಗಳು ಚಲಿಸುತ್ತವೆ. ಬಾಹುಗಳು ನಾನಾ ಭಾಗಗಳಾಗಿ ಚಿಲ್ಲೊಡೆದಿವೆ. ಇವುಗಳಲ್ಲಿ ಸಂಯುಕ್ತ ಎಲೆಯಲ್ಲಿರುವಂಥ ರಚನೆಗಳಿವೆ. ಬಾಹುಗಳ ತುದಿಯವರೆಗೂ ಆಂಬುಲ್ಯಾಕ್ರ ಇದೆ. ಬಾಯಿ ಓರಲ್ ಭಾಗದ ಮಧ್ಯೆ ಇದೆ. ಗುದದ್ವಾರ ಮಧ್ಯಭಾಗದಿಂದ ಸ್ವಲ್ಪ ಅತ್ತಕಡೆ ಇರುತ್ತದೆ. ಆರ್ಡೊವಿಶಿಯನ್ ಕಾಲದಿಂದ ಇಂದಿನವರೆಗೂ ಇವು ಪಸರಿಸಿವೆ. ಈ ವರ್ಗದಲ್ಲಿ ನಾಲ್ಕು ಗಣಗಳಿವೆ. ಗಣ 1. ಇನಾಡುನೇಟ. ಗಣ 2. ಫ್ಲೆಕ್ಸಿಬಿಲಿಯ, ಗಣ 3. ಕಾಮೆರೇಟ ಇವು ಗತವಂಶವಾಗಿವೆ. ಗಣ 4 ಆರ್ಟಿಕ್ಯುಲೇಟ. ಇದು ನಾಶವಾಗಿಹೋಗಿರುವ ಮತ್ತು ಬದುಕಿರುವ ಪ್ರಾಣಿಗಳೆರಡನ್ನೂ ಒಳಗೊಂಡಿದೆ.
ವರ್ಗ 1 ಹಾಲೊಥೂರಾಯ್ಡಿಯ: ಇವನ್ನು ಸಮುದ್ರ ಸೌತೆಯೆಂದು ಕರೆಯಲಾಗಿದೆ. ಶರೀರ ಸೌತೆಕಾಯಂತಿದ್ದು ಒಂದು ತುದಿಯಲ್ಲಿ ಓರಲ್‍ಭಾಗವೂ ಮತ್ತೊಂದು ತುದಿಯಲ್ಲಿ ಅಬೋರಲ್ ಭಾಗವೂ ಇದೆ. ಒಂದೇ ಮುಖನಾಗಿ ನೆಲದ ಮೇಲೆ ಬಿದ್ದಿರುವುದರಿಂದ ಶರೀರದ ಒಂದು ಭಾಗ ಚಪ್ಪಟೆಯಾಗಿರುತ್ತದೆ. ರೇಡಿಯಲ್ ಸಿಮಿಟ್ರಿಯನ್ನು ಕಳೆದುಕೊಂಡು ಸಮಪಾಶ್ರ್ವಸ್ಥಿತಿಯನ್ನು ಗಳಿಸುತ್ತಿರುವುದು ಕಂಡುಬರುತ್ತದೆ. ಓರಲ್‍ಭಾಗದಲ್ಲಿ ಬಾಯಿ ಇದೆ. ಬಾಯಿ ಸುತ್ತಲೂ ಟೆಂಟಕಲ್‍ಗಳಿವೆ. ಇವು ಜಲಪರಿಚಲನಾಂಗಕ್ಕೆ ಸಂಬಂಧ ಕಲ್ಪಿಸಿಕೊಂಡಿವೆ. ಶರೀರದ ಚರ್ಮ ಒರಟಾಗಿದೆ. ಒಳ ಅಸ್ಥಿ ನಶಿಸಿಹೋಗಿ ಸೂಕ್ಷ್ಮ ಮುಳ್ಳಿನಂಥ ರಚನೆಗಳಾಗಿದೆ. ನಳಿಕೆಪಾದಗಳು ಚಲನೆಗೆ ಸಹಾಯಮಾಡುತ್ತವೆ. ಕೆಲವು ಜೀವಿಗಳಲ್ಲಿ ಇವು ಇಲ್ಲವೆ ಇಲ್ಲ. ನಳಿಕೆಪಾದಗಳು ಆಂಬುಲ್ಯಾಕ್ರಗಳಲ್ಲಿಯೇ ಇರಬಹುದು. ಇಲ್ಲದಿದ್ದಲ್ಲಿ ಶರೀರದ ಎಲ್ಲ ಭಾಗದಲ್ಲೂ ಹರಡಿಕೊಂಡಿರಬಹುದು. ಜನನಾಂಗ ಒಂದೇ ಇರಬಹುದು; ಅಥವಾ ಎರಡಿದ್ದು ಬಹಳ ನಾಳಗಳಂಥ ರಚನೆಗಳನ್ನು ಹೊಂದಿರಬಹುದು. ಈ ವರ್ಗದಲ್ಲಿ ಐದು ಗಣಗಳಿವೆ.

	ವರ್ಗ 2. ಎಕಿನಾಯ್ಡಿಯ: ಈ ಜೀವಿಗಳು ದುಂಡಗೆ ತಟ್ಟೆಯಂತೆ, ಕೋಳಿ ಮೊಟ್ಟೆಯಾಕಾರಕ್ಕೆ ಅಥವಾ ಹೃದಯದ ಆಕಾರಕ್ಕೆ ತಿರುಗಿವೆ. ಶರೀರದ ಮೇಲೆ ಚಲಿಸಬಲ್ಲ ಮುಳ್ಳುಗಳಿವೆ. ಟೆಸ್ಟ್ ಅಥವಾ ಥೀಕ ಗಟ್ಟಿಯಾದ ಪೆಟ್ಟಿಗೆಯಂತಿದೆ. ಇದಕ್ಕೆ ಕಾರಣ ಇದರಲ್ಲಿರುವ ಅಸ್ಥಿತಟ್ಟೆಗಳು ಬಿಗಿಯಾಗಿ ಬೆಸೆದುಕೊಂಡಿರುವುದೇ. ಶರೀರದಲ್ಲಿ ಆಂಬುಲ್ಯಾಕ್ರಲ್ ಭಾಗ ಮತ್ತು ಇಂಟರ್ ಆಂಬುಲ್ಯಾಕ್ರಲ್ ಭಾಗಗಳು ಎದ್ದುಕಾಣುತ್ತವೆ. ಆಂಬುಲ್ಯಾಕ್ರಲ್ ತಟ್ಟೆಗಳಲ್ಲಿ ಪಾದಗಳು ಹೊರಬರಲು ರಂಧ್ರಗಳಿವೆ. ಪಾದಗಳು ಚಲಿಸಲು ಸಹಕರಿಸುತ್ತವೆ. ಈ ಪ್ರಾಣಿಗಳನ್ನು ಸಮುದ್ರದ ಅರ್ಚಿನ್‍ಗಳೆನ್ನುತ್ತಾರೆ. ಆಂಬುಲ್ಯಾಕ್ರಲ್‍ಗಳು ಬಾಯಿಂದ ಅಬೋರಲ್ ದ್ವಾರದವರೆಗೂ ಇವೆ. ಬಾಯಿ ಓರಲ್‍ಭಾಗದ ಮಧ್ಯೆ ಇದ್ದು ಅದರ ಸುತ್ತಲೂ ಪೊರೆಯಂಥ ಪೆರಿಪ್ರಾಕ್ಟ್ ಇದೆ. ಜನನಾಂಗಗಳು ಪಂಚಮುಖವಾಗಿವೆ. ಈ ಜೀವಿಗಳು ಆರ್ಡೊವಿಶಿಯನ್ ಕಾಲದಿಂದ ಪ್ರಾರಂಭವಾಗಿ ಇಂದಿಗೂ ಇವೆ. ಈ ವರ್ಗ ಮೂರು ಉಪವರ್ಗಗಳನ್ನು ಹೊಂದಿದೆ.

ವರ್ಗ 3. ಆಸ್ಟೆರಾಯ್ಡಿಯ: ಚಪ್ಪಟೆಯಾಗಿರುವ ಪಂಚಮುಖ ಅಥವಾ ಬಾಹುಗಳುಳ್ಳ ಎಕಿನೊಡರ್ಮೇಟಗಳಿವು. ನಕ್ಷತ್ರದಂಥ ಶರೀರ ಮತ್ತು ಸಾಮಾನ್ಯವಾಗಿ ಐದು ಬಾಹುಗಳಿವೆ. ಓರಲ್ ಭಾಗವು ತಳಮುಖವಾಗಿದೆ. ನಳಿಕೆಪಾದಗಳು, ಜಲಪರಿಚಲನಾಂಗಗಳು ಚೆನ್ನಾಗಿ ಬೆಳೆದಿವೆ. ಆಂಬುಲ್ಯಾಕ್ರಗಳು ಐದಿದ್ದು ಹಳ್ಳದಂತೆ ಕಾಣುತ್ತವೆ. ಜೀರ್ಣಾಂಗ ಪ್ರತಿ ಬಾಹುವಿನೊಳಕ್ಕೂ ಪಸರಿಸಿವೆ. ಈ ವರ್ಗ ಐದು ಗಣಗಳನ್ನು ಹೊಂದಿದೆ.

ವರ್ಗ 4. ಓಫಿಯೂರಾಯ್ಡಿಯ: ಚಪ್ಪಟೆಯಾಗಿರುವ ಪಂಚಭುಜಾಕೃತಿಯುಳ್ಳ ಎಕಿನೊಡರ್ಮಗಳಿವು. ಸಾಮಾನ್ಯವಾಗಿ ತೆಳ್ಳಗಿರುವ ಐದು ಬಾಹುಗಳು ಇರುತ್ತವೆ. ಬಾಹುಗಳ ಚಲನೆ ಹಾವಿನ ಚಲನೆಯನ್ನು ಹೋಲುತ್ತದೆ. ಬಾಹುಗಳು ಕವಲೊಡೆದು ರೆಂಬೆಗಳನ್ನು ಹೊಂದಿರಬಹುದು. ಬಾಹುಗಳಲ್ಲಿ ಆಂಬೂಲ್ಯಾಕರದ ಕಾಲುವೆಗಳು ಇರುವುದಿಲ್ಲ. ಶರೀರ ಮತ್ತು ಬಾಹುಗಳು ಚಪ್ಪಟೆಯಾದ ತಟ್ಟೆಗಳಿಂದ ಆವೃತವಾಗಿವೆ. ಜೀರ್ಣಾಂಗ ಬಾಹುಗಳಿಗೆ ಪಸರಿಸುವುದಿಲ್ಲ. ಮ್ಯಾಡ್ರಿಪ್ಲೊರೈಟ್ ರಂಧ್ರ ಓರಲ್ ಭಾಗದಲ್ಲಿಯೇ ಇದೆ. ಈ ಜೀವಿಗಳು ಮಿಸಿಸಿಪಿಯನ್ ಕಾಲದಿಂದ ಪ್ರಾರಂಭವಾಗಿ ಇಂದಿನವರೆಗೂ ಇದೆ. 	
	(ಎಲ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ